ಎಕೈನೊಕ್ಲೋವಾ
	ಗ್ರ್ಯಾಮಿನಿ ಅಥವಾ ಪೊಯೇಸಿ ಕುಟುಂಬಕ್ಕೆ ಸೇರಿದ ವಾರ್ಷಿಕ ಅಥವಾ ಬಹುವಾರ್ಷಿಕ ಹುಲ್ಲು. ಪ್ರಪಂಚದ ಎಲ್ಲ ಉಷ್ಣಪ್ರದೇಶಗಳಲ್ಲೂ ಬೆಳೆಯುತ್ತದೆ. ಎತ್ತರ ಸಾಮಾನ್ಯವಾಗಿ 3/4 ಮೀಟರಿನಿಂದ 1 1/4 ಮೀಟರು. ಕೆರೆ ಕೊಳಗಳ ಅಂಗಳದಲ್ಲಿ, ಕೆಲವೊಮ್ಮೆ ನೀರಿನಲ್ಲಿ ಅರ್ಧ ಮುಳುಗಿದಂತೆ, ಬತ್ತದ ಗದ್ದೆಗಳಲ್ಲಿ ಕಳೆಯಂತೆ ಬೆಳೆಯುತ್ತದೆ. 

	ದನಗಳಿಗೆ ಈ ಹುಲ್ಲು ಬಹು ಪ್ರಿಯ. ಅಲ್ಲದೆ ಇದರಲ್ಲಿ ಒಳ್ಳೆಯ ಪೌಷ್ಟಿಕಾಂಶಗಳಿರುವುದರಿಂದ ಹಸಿಯಾಗಿಯೂ ಒಣಗಿದ ಮೇಲೂ ದನಗಳಿಗೆ ಒಳ್ಳೆಯ ಮೇವು. ಹೀಗಾಗಿ ಅನೇಕ ಕಡೆ ಇದನ್ನು ಗೋಮಾಳಗಳಲ್ಲಿ ಬೆಳೆಸುತ್ತಾರೆ.

	ಇದರಲ್ಲಿ ಹಲವಾರು ಪ್ರಭೇದಗಳಿದ್ದು ಭಾರತದಲ್ಲಿ ನಾಲ್ಕು ಪ್ರಭೇದಗಳು ಬೆಳೆಯುತ್ತವೆ. ಅವು ಎ. ಕೊಲೋನಮ್, ಎ. ಕ್ರಸ್-ಗಾಲಿ, ಎ. ಫ್ರಮಂಟೇಸಿಯ ಮತ್ತು ಎ. ಸ್ಟಾಗ್ನಿನ- ಇವನ್ನು ದನಗಳಿಗೆ ಮೇವಾಗಿ ಉಪಯೋಗಿಸುವುದಲ್ಲದೆ ಕಾಳನ್ನು ಬರಗಾಲದಲ್ಲಿ ಜನ ಆಹಾರವಾಗಿ ಉಪಯೋಗಿಸುತ್ತಾರೆ. ಈಜಿಪ್ಟಿನಲ್ಲಿ ಚೌಳು ನೆಲವನ್ನು ಕೃಷಿಯೋಗ್ಯಮಾಡಲು ಇದರ ಕೆಲವು ಪ್ರಭೇದಗಳನ್ನು ಬೆಳೆಸುತ್ತಾರೆ. 										
	(ಕೆ.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ